ಚಿತ್ರದುರ್ಗ ಕೋಟೆ
ಚಿತ್ರದುರ್ಗ ಕೋಟೆಯ ವೈಶಿಷ್ಟ್ಯತೆ:-
ಯುದ್ದ ತಂತ್ರಕ್ಕೆ ಅನುಗುಣವಾಗಿ ನಿರ್ಮಿಸಿದ ಈ ಕೋಟೆಯ ರಚನೆ, ವಿನ್ಯಾಸ ಮತ್ತು ತಂತ್ರಗಾರಿಕೆ ಚಿತ್ರದುರ್ಗದ ಪಾಳೆಯಗಾರರ ಶೌರ್ಯ ಪರಾಕ್ರಮಗಳ ಸಂಕೇತವಾಗಿದೆ. ಇವರು ಕಟ್ಟಿಸಿದ ಕೋಟೆ “ಏಳು ಸುತ್ತಿನಕೋಟೆ” ಎಂಬ ಖ್ಯಾತಿಗೆ ಪಾತ್ರವಾಗಿದೆಯಲ್ಲದೆ, ಸಿಡಿಲಿಗೂ, ಮಳೆಗೂ ಜಗ್ಗದ ಉಕ್ಕಿನ ಕೋಟೆ ಎಂಬ ಹೆಸರು ಪಡೆದಿದೆ. ಹಾಗೆಯೇ, ಇವರು ಆಳ್ವಿಕೆ ಮಾಡಿದ ಈ ನೆಲವು “ಗಂಡು ಮೆಟ್ಟಿದ ನಾಡು” ಎಂಬ ಹೆಸರು ಪಡೆಯಿತು. ಚಿತ್ರದುರ್ಗ ಕೋಟೆಯು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ವಿವರಿಸುವಂತೆ ‘ಗಿರಿದುರ್ಗ’ ಜಲದುರ್ಗ’ ಮತ್ತು ‘ ವನದುರ್ಗ’ದ ಎಲ್ಲಾ ಲಕ್ಷಣಗಳನ್ನು ಒಳಗೊಂಡಿರುವ ವಿಸ್ಮಯಕಾರಿ ಸ್ಮಾರಕ. ಈ ಕೋಟೆಯಲ್ಲಿಇ 19 ಅಗಸೆ ಬಾಗಿಲುಗಳು, 38 ದಿಡ್ಡಿಬಾಗಿಲುಗಳು, 35 ಕಳ್ಳಕಿಂಡಿಗಳು, 4 ಗುಪ್ತದ್ವಾರಗಳಿವೆ. ಬೆಟ್ಟದ ಮೇಲೆ ಏಕನಾಥೇಶ್ವರಿ, ಹಿಡಂಬೇಶ್ವರಿ, ಸಂಪಿಗೆಸಿದ್ದೇಶ್ವರ, ಫಲ್ಗುಣೇಶ್ವರ ದೇವಾಲಯ ಸೇರಿದಂತೆ ಪ್ರಮುಖವಾದ 14 ದೇವಾಲಯಗಳಿವೆ. ಮುರುಘಾಮಠ, ಒನಕೆ ಕಿಂಡಿ, ಮದ್ದು ಬೀಸುವ ಕಲ್ಲುಗಳು ಅರಮನೆ ಅವಶೇಷಗಳು, ಕಣಿವೆಗಳು, ಕಣಜಗಳು, ಎಣ್ಣೆಕೊಳಗಳು, ಗರಡಿಮನೆ, ಮದ್ದಿನಮನೆಗಳು, 40 ಅಡಿ ಎತ್ತರದ ಉಯ್ಯಾಲೆ ಕಂಬ, ಪಹರೆ ಗೃಹಗಳು, ಬಂದೂಕು ಕಿಂಡಿಗಳು, ವೀಕ್ಷಣಾಗೋಪುರಗಳು, ಬುರುಜು-ಬತೇರಿಗಳು, ಸೈನಿಕ ಗೃಹಗಳು, ಪ್ರವಾಸಿಗರಿಗೆ ಸವಾಲೆನಿಸುವ ತುಪ್ಪದ ಕೊಳದ ಬತೇರಿ ಬೆಟ್ಟ, ಇಲ್ಲಿಗೆ ಹತ್ತಲು ಇರುವ ಕುದುರೆ ಹೆಜ್ಜೆಗಳು, ಮುಂತಾದ ನೂರಾರು ಸ್ಮಾರಕಗಳು ಕೋಟೆಯಲ್ಲಿವೆ. ಈ ಎಲ್ಲಾ ತಾಂತ್ರಿಕ ರಚನೆಗಳನ್ನೊಳಗೊಂಡ ಚಿತ್ರದುರ್ಗದ ಕೋಟೆಯನ್ನು “ದಿಕ್ಕು ತಪ್ಪಸ್ಥದ ;ತಪ್ಪಿಹೊಕ್ಕರ” ಎನ್ನುವಂತೆ ಈ “ಕೋಟೆ ನೋಡಲು ಬಹು ಸುಂದರ ಕಾದಾಡಲು ಬಲು ಭಯಂಕರ” ಎನ್ನುವ ಗಾದೆ ಮಾತು ಕೋಟೆಗೆ ಅರ್ಥಪೂರ್ಣವಾಗಿದೆ.
ಫೋಟೋ ಗ್ಯಾಲರಿ
ಎಲ್ಲವನ್ನೂ ವೀಕ್ಷಿಸಿತಲುಪುವ ಬಗೆ :
ವಿಮಾನದಲ್ಲಿ
ಬೆಂಗಳೂರು ಮತ್ತು ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣಗಳು.
ರೈಲಿನಿಂದ
ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ನೇರವಾದ ರೈಲ್ವೇ ಸಂಪರ್ಕವಿದೆ.
ರಸ್ತೆ ಮೂಲಕ
ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ 4 ಹಾದು ಹೋಗುತ್ತದೆ. ಚಿತ್ರದುರ್ಗಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬಸ್ಸುಗಳ ಸಂಚಾರವಿದೆ. ಹಾಗೂ ಮಹಾರಾಷ್ಟ್ರ, ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶಗಳಿಂದ ಬಸ್ಸುಗಳ ಸಂಚಾರ ಸೌಲಭ್ಯವಿದೆ.