Close

ಪ್ರವಾಸೋದ್ಯಮ

ಚಿತ್ರದುರ್ಗ ಜಿಲ್ಲೆಯು ಜಗತ್ತಿಗೆ ಪರಿಚಯವಾಗಿರುವುದು ಸಾಮಾನ್ಯವಾಗಿ ಇಲ್ಲಿಯ ಸ್ಮಾರಕಗಳಿಂದ ಎಂಬುದು ಸರ್ವವಿಧಿತ. ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ವಿವಿಧ ಕಾಲಘಟ್ಟದಲ್ಲಿ  ನಿರ್ಮಿಸಲಾದ ನೂರಾರು ಸ್ಮಾರಕಗಳು ಜಿಲ್ಲೆಯಾದ್ಯಂತ ಇವೆ. ಇವು ಈ ಭಾಗವನ್ನಾಳಿದ ವಿವಿಧ ಮನೆತನಗಳ ಪ್ರತಿಬಿಂಬವಾಗಿವೆಯಲ್ಲದೆ, ಪ್ರಮುಖ ಪ್ರವಾಸಿ ತಾಣಗಳಾಗಿವೆ.  ಕರ್ನಾಟಕದ ಮಧ್ಯಭಾಗದಲ್ಲಿರುವ ಚಿತ್ರದುರ್ಗ ಜಿಲ್ಲೆಯನ್ನು ಕರ್ನಾಟಕವನ್ನಾಳಿದ ಬಹುತೇಕ ಮನೆತನಗಳು ಈ ಭಾಗದಲ್ಲಿ ಆಳ್ವಿಕೆ ನಡೆಸಿವೆ.ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಮೌರ್ಯ ಚಕ್ರವರ್ತಿ ಅಶೋಕನ ಆಳ್ವಿಕೆಗೆ ಈ ಜಿಲ್ಲೆಯ ಉತ್ತರಭಾಗ ಒಳಪಟ್ಟಿದ್ದರೆ, ಕ್ರಿಸ್ತಶಕದ ನಂತರದಲ್ಲಿ ಕರ್ನಾಟಕವನ್ನು ಆಳಿದ ಶಾತವಾಹನರು, ಕದಂಬರು, ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು, ಚಿತ್ರದುರ್ಗ ಪಾಳೇಗಾರರು ಮುಂತಾದ ಎಲ್ಲಾ ಪ್ರಮುಖ ರಾಜವಂಶಗಳ ಅಧೀನ ಅರಸರ ಸಾಮ್ರಾಜ್ಯಗಳ ಭಾಗವಾಗಿ  ಸಾಗಿ ಬಂದ ಸುದೀರ್ಘ ಇತಿಹಾಸ ಈ ಜಿಲ್ಲೆಯದು.

ಇವರ ಆಳ್ವಿಕೆಯ ಸಂದರ್ಭದಲ್ಲಿ ನಿರ್ಮಿಸಿದ ಇಲ್ಲಿಯ ಸ್ಮಾರಕಗಳು ಅಂದಿನ ವೈಭವದ ಬದುಕಿಗೆ ಹಿಡಿದ ಕನ್ನಡಿಗಳಂತಿವೆ.  ಅಲ್ಲದೆ ಈ ಪರಿಸರದ ಬದುಕು, ಆಡಳಿತದ ವಿಚಾರ, ಸಾಂಸ್ಕೃತಿಕ ವಿಚಾರ, ಆಳ್ವಿಕೆಯ ಸಾಮರಸ್ಯ ಜನ ಸಾಮಾನ್ಯರ ಬಗ್ಗೆ ರಾಜನಿಗಿದ್ದ ಕಾಳಜಿ, ರಾಜನ ಬಗ್ಗೆ ಜನಸಾಮಾನ್ಯರಿಗಿದ್ದ ಗೌರವ ಮುಂತಾದ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಬಹು ಮುಖ್ಯವಾಗಿ ಸ್ಮಾರಕಗಳು ಕಾಲಘಟ್ಟದಲ್ಲಿ ಆದ ವಾಸ್ತುರಚನೆ ಮತ್ತು ಬೆಳವಣಿಗೆಯನ್ನು ಪರಿಚಯಿಸುವುದರೊಂದಿಗೆ ಸ್ಥಳೀಯ ಸಂಪನ್ಮೂಲಗಳ ಸಧ್ಬಳಕೆಯ ಯಜಮಾನಿಕೆಯನ್ನು ಸಂಕೇತಿಸುತ್ತವೆ.

ವಿಶೇಷವಾಗಿ ವಿಜಯನಗರ ಸಾಮ್ರಾಜ್ಯದ ನಂತರ ಚಿತ್ರದುರ್ಗವನ್ನು ಒಂದು ಕೇಂದ್ರನ್ನಾಗಿ ಮಾಡಿಕೊಂದು ಕ್ರಿ.ಶ. 16 ನೇ ಶತಮಾನದ ಮಧ್ಯಕಾಲದಿಂದ ಕ್ರಿ.ಶ. 18 ನೇ ಶತಮಾನದ ುತ್ತ  ಉತ್ತರಾರ್ಧವರೆಗೆ ಆಳ್ವಿಕೆ ನಡೆಸಿದವರೆಂದರೆ ಚಿತ್ರದುರ್ಗದ ಪಾಳೇಯಗಾರರು. ಇವರು ಚಿತ್ರದುರ್ಗದ ನಾಯಕರೆಂದೇ ಕರ್ನಾಟಕದ ಇತಿಹಾಸದಲ್ಲಿ ಪ್ರಸಿಧ್ದಿ ಪಡೆದಿದ್ದಾರೆ..  ಈ ಮನೆತನದಲ್ಲಿ 14 ಜನ ಪಾಳೆಯಗಾರರು ಸುಮಾರು 211 ವರ್ಷಗಳ ಕಾಲ ಆಳ್ವಿಕೆ ನಡೆಸಿದರಲ್ಲದೆ,  ವಿಜಯನಗರದ ಅರಸರು ಹಾಕಿಕೊಟ್ಟ ಮಾರ್ಗದಲ್ಲಿಯೇ ಮುನ್ನಡೆದು ಅವರ ಸಂಸ್ಕೃತಿ ಮತ್ತು  ಪರಂಪರೆಯನ್ನು ಮುಂದುವರೆಸಿದರೆಂದು ಹೇಳಬಹುದು. ಇವರು ಸ್ಥಳೀಯ ಜನಪದೀಯ ಸಂಸ್ಕೃತಿಗೂ ಪ್ರೋತ್ಸಾಹ ನೀಡುವುದರ ಮೂಲಕ ಶಿಷ್ಟ ಮತ್ತು ದೇಶೀಯ ಸಂಸ್ಕೃತಿಗಳ ಸಂಮ್ಮೇಳನಕ್ಕೆ ಅವಕಾಶ ಕಲ್ಪಿಸಿದರು. ಜಿಲ್ಲೆಯ ಸಾಂಸ್ಕೃತಿಕ ಇತಿಹಾಸದಲ್ಲಿ ವೈವಿಧ್ಯತೆಯನ್ನು ಕಾಪಾಡಿಕೊಂಡು ಬರುತ್ತಾ ಕರ್ನಾಟಕದ ಪರಂಪರೆಯನ್ನು ಎತ್ತಿ ಹಿಡಿದರಲ್ಲದೆ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನ ಕಲ್ಪಿಸಿಕೊಂಡರು. ಇವರು ವಾಲ್ಮೀಕಿ ಮತಸ್ಥರೂ, ಕಾಮಗೇತಿ ವಂಶಜರೂ ಆಗಿದ್ದು, ‘ಕಸ್ತೂರಿ’ ಎಂಬ ಅಭಿದಾನವನ್ನು  ‘ಶ್ರೀಮನ್ಮಹಾನಾಯಕಾಚಾರ್ಯ’ ಎಂಬ ಬಿರುದನ್ನು ಧರಿಸಿಕೊಂಡು ಇತಿಹಾಸದಲ್ಲಿ ಮದಕರಿನಾಯಕರೆಂದೇ ಪ್ರಸಿಧ್ದರಾಗಿದ್ದಾರೆ. ಇವರ ಕಾಲದಲ್ಲಿ ಅನೇಕ ಪ್ರಜಾಹಿತ ಕಾರ್ಯಗಳು ನಡೆದವು. ದೇವಾಲಯಗಳು, ಅಗ್ರಹಾರಗಳು, ಕೆರೆಗಳು, ಮಠಗಳು, ಕೋಟೆ-ಕೊತ್ತಲಗಳು ಇವರ ಕಾಲದಲ್ಲಿ ನಿರ್ಮಾಣಗೊಂಡವು.  ಆದ್ದರಿಂದಲೇ ಇವರ ಆಳ್ವಿಕೆಯ ಕಾಲವನ್ನು ಒಂದು ವರ್ಣರಂಜಿತ ಅಧ್ಯಾಯವೆಂದು ಕರೆಯಲಾಗುತ್ತಿದೆ.