Close

ಇತಿಹಾಸ

ಚಿತ್ರದುರ್ಗವು ಬೆಂಗಳೂರಿನಿಂದ 200 ಕಿ.ಮೀ ಅಂತರದಲ್ಲಿ ಮತ್ತು ಬೆಂಗಳೂರಿನ ವಾಯುವ್ಯ ದಿಕ್ಕಿನಲ್ಲಿರುತ್ತದೆ. ಚಿತ್ರದುರ್ಗವು ಡೆಕ್ಕನ್ ಪ್ರಸ್ತಭೂಮಿಯ ಹೃದಯ ಭಾಗದಲ್ಲಿದ್ದು ಈ ಜಿಲ್ಲೆಯ ಶೌರ್ಯ ಮತ್ತು ಪರಾಕ್ರಮಕ್ಕೆ ಹೆಸರಾಗಿದೆ. ಮೂಲತಃ ಈ ನಗರಕ್ಕೆ ಚಿತ್ರಕಲ್ಲು ದುರ್ಗ, ಚಿನ್ಮೂಲಾದ್ರಿ, ಚಿಂತಲಕಲದುರ್ಗ, ಚಿಂತಲಕಲ್ಲು ದುರ್ಗ ಟಿಪ್ಪುಸುಲ್ತಾನನ ಕಾಲದಲ್ಲಿ ಫರ್ರಶಾಬಾದ್ ಎಂದು ಬ್ರಿಟೀಷರ ಕಾಲದಲ್ಲಿ ಚಿಟಲುಡ್ರಗ್ ಎಂದು ಅಂತಿಮವಾಗಿ ಹಾಲಿ ಚಿತ್ರದುರ್ಗ ಎಂದು ಗುರುತಿಸಿಕೊಂಡಿರುತ್ತದೆ.

ಮೊಳಕಾಲ್ಮೂರು ತಾಲ್ಲೂಕು ಬ್ರಹ್ಮಗಿರಿ ಸಮೀಪ ದೊರತಿರುವ ಅಶೋಕನ ಕಾಲದ ಶಿಲಾಶಾಸನದ ಪ್ರಕಾರ ಚಿತ್ರದುರ್ಗವು ಮೌರ್ಯ ಸಂಸ್ಥಾನದ ಭಾಗವಾಗಿರುತ್ತದೆ. ಮೌರ್ಯ ಸಂಸ್ಥಾನವು ಪತನಗೊಂಡ ನಂತರ ರಾಷ್ಟ್ರಕೂಟರು, ಚಾಲುಕ್ಯರು ಮತ್ತು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿತ್ತು. 14ನೇ ಶತಮಾನದಲ್ಲಿ ವಿಜಯನಗರ ಅರಸರ ಆಳ್ವಿಕೆಗೆಯಲ್ಲಿದ್ದೂ ಕ್ರಿ.ಶ.1565 ರಲ್ಲಿ ನಡೆದ ವಿಜಯನಗರದ (ತಾಳಿಕೋಟೆ ಯುದ್ಧದ) ಪತನದ ನಂತರ ಚಿತ್ರದುರ್ಗದ ಪಾಳೆಯಗಾರರು (ನಾಯಕರ) ಸ್ವತಂತ್ರ ಪಾಳೆಯಗಾರರೆನಿಸಿಕೊಂಡರು. ಕ್ರಿ.ಶ.1779 ರಲ್ಲಿ ಚಿತ್ರದುರ್ಗದ ಕೋಟೆಯನ್ನು ಹೈದರಾಲಿ ಮತ್ತು ಅವರ ಮಗ ಟಿಪ್ಪುಸುಲ್ತಾನ್ ಇವರು ಕೋಟೆಯನ್ನು ವಶಪಡಿಸಿಕೊಂಡು ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಂಡರು. ಬ್ರಿಟಿಷರಿಂದ ಟಿಪ್ಪುಸುಲ್ತಾನ್ ಸೋಲನ್ನು ಅನುಭವಿಸಿದ ನಂತರ ಕೋಟೆಯು ಯದು ವಂಶ ಸಂಸ್ಥಾನದ ಆಡಳಿತದ ವ್ಯಾಪ್ತಿಗೆ ಸೇರಲ್ಟಡುತ್ತದೆ.

ಚಿತ್ರದುರ್ಗದ ಕೋಟೆಯು ಊಹೆಗೂ ನಿಲುಕದ ಆಕಾರದ ಕಲ್ಲುಬಂಡೆಗಳು, ಕಣಿವೆಗಳು, ಏಳುಸುತ್ತಿನ ಕೋಟೆ, ಕೊತ್ತಲ, ಬುರುಜು ಬತೇರಿಗಳು ಅಪಾರ ದೇವ ಮಂದಿರಗಳು ಒಟ್ಟಾರೆ ಪ್ರಾಚೀನ ಕಾಲದಿಂದ-ಆಧುನಿಕ ಕಾಲದವರೆಗಿನ ಐತಿಹಾಸಿಕ ಸ್ಮಾರಕಗಳ ಕೇಂದ್ರ ಬಿಂದುವಾಗಿರುತ್ತದೆ. ತುಂಟ ರಾಕ್ಷಸರ ಆಟದ ಮೈದಾನದಲ್ಲಿರುವ ಕಲ್ಲು ಬಂಡೆಗಳು ಸುತ್ತಲು ಹರಡಿದಂತೆ ಇದ್ದೂ ಬಾನಾಂಗಳದ ನೆರಳು ಗೆರೆಯ ಚಿತ್ರಗಳಂತೆ ಗೋಚರಿಸುತ್ತವೆ. ಮಹಾಭಾರತ ಮಹಾಕಾವ್ಯದನ್ವಯ ಪಾಂಡವರು ಮತ್ತು ಅವರ ತಾಯಿ ಕುಂತಿಯೊಂದಿಗೆ ವನವಾಸದಲ್ಲಿರುವಾಗ ಚಿತ್ರದುರ್ಗದ ಮಾರ್ಗವಾಗಿ ಹೋಗುವಾಗ ನರಬಕ್ಷಕ ಹಿಡಂಬಸುರನೊಂದಿಗೆ ಮಲ್ಲಯುದ್ಧ ಮಾಡುತ್ತಾನೆ. ಈ ಮಲ್ಲಯುದ್ಧದಲ್ಲಿ ಬೃಹದಕಾರವಾದ ಕಲ್ಲುಬಂಡೆಗಳನ್ನು ಅಸ್ತ್ರಗಳಾಗಿ ಬಳಸುತ್ತಾರೆ. ಚಿತ್ರದುರ್ಗ ನಗರವು ಬೆಟ್ಟಗುಡ್ಡಗಳಿಂದ, ಕಲ್ಲುಬಂಡೆಗಳಿಂದ ಆವೃತವಾಗಿರುವುದು ಕಂಡುಬರುತ್ತದೆ. ಮಲ್ಲಯುದ್ಧದಲ್ಲಿ ಹಿಡಂಬಸುರನು ಸೋತ ನಂತರ ಈ ಪ್ರದೇಶದಲ್ಲಿ ಶಾಂತಿ ನೆಲೆಗೊಂಡಿತ್ತು.

ವಿಜಯನಗರ ಸಾಮ್ರಾಜ್ಯದ ಸೈನ್ಯದಲ್ಲಿ ಮುಖ್ಯಸ್ಥನಾಗಿ ಸೇವೆ ಸಲ್ಲಿಸುತ್ತಿದ್ದ ತಿಮ್ಮಣ್ಣ ನಾಯಕ ಇವರ ದಕ್ಷತೆ ಹಾಗೂ ಸಾಧನೆಯನ್ನು ಮೆಚ್ಚಿ ವಿಜಯನಗರ ದೊರೆಯು ಇವರನ್ನು ಚಿತ್ರದುರ್ಗದ ಗೌರ್ನರ್ ಆಗಿ ನೇಮಕ ಮಾಡುತ್ತಾರೆ. ಇದು ಚಿತ್ರದುರ್ಗ ಪಾಳೇಗಾರ ನಾಯಕರ ಆರಂಭಿಕ ಆಡಳಿತವಾಗಿರುತ್ತದೆ. ತಿಮ್ಮಣ್ಣನಾಯಕನ ಮಗ ಒಬಣ್ಣನಾಯಕ ಮದಕರಿ ನಾಯಕ ಎಂಬ ಹೆಸರಿನಲ್ಲಿ 1588 ಮತ್ತು ಇವರ ಮಗ ಕಸ್ತೂರಿ ರಂಗಪ್ಪ 1602 ರ ಅವಧಿಯಲ್ಲಿ ಶಾಂತಿಯುತವಾದ ಉತ್ತಮ ಆಳ್ವಿಕೆ ನಡೆಸುತ್ತಾರೆ. ಕಸ್ತೂರಿ ರಂಗಪ್ಪನಿಗೆ ಸಂತಾನವಿಲ್ಲದ ಕಾರಣ ದತ್ತು ಪಡೆದಿದ್ದ ಮಗನನ್ನು ಕಲವೇ ತಿಂಗಳುಗಳ ಅವಧಿಯಲ್ಲಿ ದತ್ತು ಪುತ್ರನನ್ನು ದಳವಾಯಿಗಳು ಕೊಲೆಗೈದಿರುತ್ತಾರೆ.

ಎರಡನೆ ಮದಕರಿ ನಾಯಕನ ಸಹೋದರ ಚಿಕ್ಕಣ್ಣ ನಾಯಕ ಇವರು 1676 ರಲ್ಲಿ ಸಿಂಹಾಸನವನ್ನು ಅಲಂಕರಿಸುತ್ತಾನೆ. ನಂತರ ಅವನ ಸಹೋದರನಾದ ಮೂರನೇ ಮದಕರಿ ನಾಯಕ 1686 ರಲ್ಲಿ ಅಧಿಕಾರವನ್ನು ವಹಿಸಿಕೊಳ್ಳುತ್ತಾನೆ. ಮೂರನೇ ಮದಕರಿನಾಯಕನ ಆಳ್ವಿಕೆಯನ್ನು  ದಳವಾಯಿಗಳು ಒಪ್ಪದೇ ಇರುವುದರಿಂದ ಅವನ ದೂರ ಸಂಬಂಧಿ ಭರಮಪ್ಪನಾಯಕನಿಗೆ 1689 ರಲ್ಲಿ ಅಧಿಕಾರ ಹಸ್ತಾಂತರವಾಗುತ್ತದೆ. ಈತನು ನಾಯಕರುಗಳ ಪೈಕಿ ಪ್ರಭಾವಿ ಹಾಗೂ ಉತ್ತಮ ಆಡಳಿತಗಾರನ್ನೆನಿಸಿಕೊಳ್ಳುತ್ತಾನೆ. ಇವರ ಆಡಳಿತದ ಅವಧಿಯು ಅಲ್ಪವಾದಿ ಆಗಿದ್ದದ್ದರಿಂದ ಇವರ ಯಾವುದೇ ಉತ್ತಮ ಆಡಳಿತ ನೀಡಲು ಅವಕಾಶವಾಗಿರುವುದಿಲ್ಲ. 1721 ರಲ್ಲಿ ನಾಲ್ಕನೆ ಹಿರಿ ಮದಕರಿನಾಯಕ, 1748 ರಲ್ಲಿ ಎರಡನೇ ಕಸ್ತೂರಿ ರಂಗಪ್ಪನಾಯಕ, 1758 ರಲ್ಲಿ ಐದನೇ ಮದಕರಿ ನಾಯಕರ ಆಳ್ವಿಕೆಯೂ ಅಷ್ಟಷ್ಟಿದ್ದು ಗಮನರ್ಹವಾಗಿರುವುದಿಲ್ಲ.

ಭೌಗೋಳಿಕ ವಿವರ : 

ಕರ್ನಾಟಕ ರಾಜ್ಯದ ಜಿಲ್ಲೆಗಳಲ್ಲಿ ಚಿತ್ರದುರ್ಗ ಜಿಲ್ಲೆಯು ಒಂದಾಗಿದ್ದು, ಉತ್ತರದಲ್ಲಿ ಬಳ್ಳಾರಿ ಜಿಲ್ಲೆ, ಪೂರ್ವ ದಿಕ್ಕಿನಲ್ಲಿ ಅನಂತರಪು ಜಿಲ್ಲೆ, ಆಗ್ನೇಯ ದಿಕ್ಕಿನಲ್ಲಿ ತುಮಕೂರು ಜಿಲ್ಲೆ ಪಶ್ಚಿಮದಲ್ಲಿ ಶಿವಮೊಗ್ಗ ಜಿಲ್ಲೆ, ವಾಯುವ್ಯದಲ್ಲಿ ಧಾರವಾಡ ಜಿಲ್ಲೆ, ನೈರುತ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆಗಳಿಂದ ಸುತ್ತುವರಿಯಲ್ಪಟ್ಟಿರುತ್ತದೆ. ಮೂಲತಃ ಚಿತ್ರದುರ್ಗ ಜಿಲ್ಲೆಯು 9 ತಾಲ್ಲೂಕು (ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು, ದಾವಣಗೆರೆ, ಜಗಳೂರು ಮತ್ತು ಹರಿಹರ) ಒಳಗೊಂಡಿದ್ದು, ದಿ:15.08.1997 ರಂದು ಹೊಸದಾಗಿ ದಾವಣಗೆರೆ ಜಿಲ್ಲೆ ರಚನೆಯಾದ ಕಾರಣ ಈ ಜಿಲ್ಲೆಯ ಮೂರು ತಾಲ್ಲೂಕುಗಳು (ದಾವಣಗೆರೆ, ಜಗಳೂರು, ಹರಿಹರ) ದಾವಣಗೆರೆ ಜಿಲ್ಲೆಗೆ ಸೇರ್ಪಡೆಯಾಗಿ ಅಂತಿಮವಾಗಿ ಹಾಲಿ ಚಿತ್ರದುರ್ಗ ಜಿಲ್ಲೆಯಲ್ಲಿ 6 ತಾಲ್ಲೂಕುಗಳು ಮಾತ್ರ ಉಳಿದಿರುತ್ತವೆ.  ಈ ಜಿಲ್ಲೆಯಲ್ಲಿ ಖನಿಜ ಸಂಪತ್ತು ಹೇರಳವಾಗಿರುತ್ತದೆ. (ಬಂಗಾರ, ತಾಮ್ರ, ಮ್ಯಾಂಗನೀಸ್, ಕಬ್ಬಿಣದ ಅದಿರು, ಗ್ರಾನೈಟ್)